ಪ್ರಾಯೋಗಿಕ ಧ್ವನಿವಿಜ್ಞಾನ

	 ಉಚ್ಛರಿತ ಧ್ವನಿಗಳ ವೈಜ್ಞಾನಿಕ ಅಧ್ಯಯನ. ಧ್ವನಿಗಳನ್ನು ಉಚ್ಛಾರಣಾತ್ಮಕ, ತರಂಗಾತ್ಮಕ, ಶ್ರವ್ಯಾತ್ಮಕವಾಗಿ ಅಭ್ಯಸಿಸಬಹುದಾದರೂ ಸೂಕ್ಷ್ಮ ಯಂತ್ರೋಪಕರಣಗಳ ಸಹಾಯದಿಂದ ಸೂಕ್ಷ್ಮಾತಿ ಸೂಕ್ಷ್ಮವಾಗಿ ಪರಿಶೀಲಿಸಿ ಪ್ರಾಯೋಗಿಕವಾಗಿ ವಿವೇಚಿಸುವ ಕೆಲಸವನ್ನು ಈ ವಿಭಾಗದಲ್ಲಿ ನಡೆಸಲಾಗುತ್ತದೆ. ಈ ವಿಭಾಗವನ್ನು ಎಸ್‍ಪರ್‍ಸನ್ ಮೊದಲಾದವರು ಯಾಂತ್ರಿಕ ಧ್ವನಿವಿಜ್ಞಾನ ಎಂತಲೂ ಕರೆದಿದ್ದಾರೆ.

	 ಧ್ವನಿಗಳ ಉಚ್ಛಾರ ಮತ್ತು ಅವುಗಳ ವರ್ಗೀಕರಣಕ್ಕೆ ಸಂಬಂಧಿಸಿದ ವಿಚಾರಗಳನ್ನು ಉಚ್ಛಾರಣಾತ್ಮಕ ಧ್ವನಿವಿಜ್ಞಾನ ಪರಿಶೀಲಿಸುವುದು. ಧ್ವನಿತರಂಗಗಳು ಪ್ರಸಾರವಾಗುವ ರೀತಿನೀತಿಗಳನ್ನು ತರಂಗಾತ್ಮಕ ಧ್ವನಿವಿಜ್ಞಾನ ವಿವೇಚಿಸುವುದು. ಹಾಗೆಯೇ ಧ್ವನಿಗಳು ಕೇಳುವವನ ಒಳಗಿವಿಯನ್ನು ಹೇಗೆ ತಲುಪುತ್ತವೆ. ಮುಂದೆ ಜ್ಞಾನೇಂದ್ರಿಯ ನರಗಳ ಮೂಲಕ ಮೆದುಳನ್ನು ಹೇಗೆ ತಲುಪುತ್ತವೆ, ಇತ್ಯಾದಿ ಶ್ರವ್ಯಲಕ್ಷಣಗಳನ್ನು ಶ್ರವ್ಯಾತ್ಮಕ ಧ್ವನಿವಿಜ್ಞಾನ ಪರಿಶೀಲಿಸಿ ವಿವೇಚಿಸುವುದು. ಹೀಗೆ ಧ್ವನಿಗಳನ್ನು ಪೂರ್ಣವಾಗಿ ಈ ಮೂರು ವಿಧಾನಗಳಲ್ಲಿ ವಿವೇಚಿಸಬಹುದಾದ ಸಾಧ್ಯತೆಗಳು ಇದ್ದರೂ ಈ ಮೂರು ಶಾಖೆಗಳೂ ಇನ್ನೂ ಪರಿಶೀಲಿಸಲಾಗದ ಹಾಗೂ ಬಿಡಿಸಲಾಗದ ಎಷ್ಟೋ ಧ್ವನಿಸಂಬಂಧಿ ವಿಚಾರಗಳು ಉಳಿದುಕೊಂಡಿರುತ್ತವೆ. ಅವನ್ನು ವಿವಿಧ ಯಂತ್ರೋಪಕರಣಗಳ ಸಹಾಯದಿಂದ ಪ್ರಾಯೋಗಿಕ ಧ್ವನಿ ವಿಜ್ಞಾನ ಪರಿಶೀಲಿಸುತ್ತದೆ.

	1. ಮುಖಮಾಪಕ: ಧ್ವನಿಗಳ ಉಚ್ಛಾರಣೆಯ ಸಮಯದಲ್ಲಿ ನಾಲಗೆಯ ಅಗ್ರಭಾಗ, ಪಶ್ಚಭಾಗ, ಮಧ್ಯಭಾಗ ಮುಂತಾದವುಗಳ ಸ್ಥಾನಗಳನ್ನು ಗುರುತಿಸಿಕೊಳ್ಳಲು ಉಪಯೋಗದಲ್ಲಿರುವ ಯಂತ್ರ. ಇದನ್ನು ಕಂಡುಹಿಡಿದವನ ಜ್ಞಾಪಕಾರ್ಥವಾಗಿ ಇದನ್ನು ಐಟ್‍ಕಿನ್‍ಸನ್ ಮುಖಮಾಪಕವೆಂದೇ ಕರೆಯುತ್ತಾರೆ. 

	2. ಕೃತಕ ತಾಲು: ಮುಖವಿರದ ಮೇಲ್ಭಾಗದಲ್ಲಿ ಕಂಡುಬರುವ ವಿಶಾಲವಾದ ತಾಲು ಪ್ರದೇಶದಲ್ಲಿ ವತ್ಸ್ರ್ಯದಿಂದ ಹಿಡಿದು ಮೃದು ತಾಲುವಿನವರೆಗೂ ಹುಟ್ಟುವ ಧ್ವನಿಗಳ ಸ್ಥಾನಗಳನ್ನು ನಿರ್ಧರಿಸಲು ಬಳಸುವ ಉಪಕರಣ. ಇತ್ತೀಚೆಗೆ ಇದರ ಬದಲು ಪ್ಯಾಲೆಟೋಗ್ರಾಮ್ ಪ್ರೊಜೆಕ್ಟರ್ ಯಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಎಷ್ಟೇ ವೇಗವಾಗಿ ಉಚ್ಛರಿಸಿದಾಗಲೂ ಧ್ವನಿಸ್ಥಾನಗಳನ್ನು ಈ ಸೂಕ್ಷ್ಮಯಂತ್ರದಿಂದ ಗುರುತಿಸಬಹುದು.

	3. ಕಾಯ್‍ಮೋಗ್ರಾಫ್: ಧ್ವನಿಗಳು ಘೋಷ ಅಥವಾ ಅಘೋಷ ಧ್ವನಿಗಳೇ, ಮಹಾಪ್ರಾಣ ಅಥವಾ ಅಲ್ಪ ಪ್ರಾಣಧ್ವನಿಗಳೇ, ಅನುನಾಸಿಕ ಅಥವಾ ನಿರನುನಾಸಿಕ ಧ್ವನಿಗಳೇ ಎಂಬ ವಿಚಾರಗಳನ್ನು ತಿಳಿಯಲು ಬಳಸುವ ಯಂತ್ರ. ಧ್ವನಿಗಳು ಉಚ್ಛಾರಕ್ಕೆ ತೆಗೆದುಕೊಳ್ಳುವ ಕಾಲದ ಮಿತಿ, ಸ್ವರಾಘಾತ, ಬಲಾಘಾತ, ಸ್ವರಲಹರಿ, ಮುಂತಾದ ಧ್ವನಿಸಂಬಂಧಿ ಲಕ್ಷಣಗಳನ್ನು ಇದರಿಂದ ಗುರುತಿಸಬಹುದು. ರೋಜ್‍ಪೆಲ್ಲಿ ಎಂಬ ವಿದ್ವಾಂಸ 1877ರಲ್ಲಿ ಅಳವಡಿಸಿದ ಈ ಯಂತ್ರವನ್ನು ಮೊದಮೊದಲು ವೈದ್ಯರು ಚಿಕಿತ್ಸೆಗಾಗಿ ಬಳಸುತ್ತಿದ್ದರು. ಈ ಯಂತ್ರವನ್ನೀಗ ಇನ್ನೂ ಸುಧಾರಿಸಲಾಗಿದೆ. ಎಲೆಕ್ಟ್ರೋಕಾಯ್‍ಮೋಗ್ರಾಫ್, ಕ್ರೋಮೋಗ್ರಾಫ್-ಇವು ಬಹುಮುಖ್ಯವಾದವು. ಎರಡನೆಯದನ್ನು ಕಂಡುಹಿಡಿದವ ಸ್ಫೇನಿನ ಲೈಯರ್‍ದ (1932). ಮಿಂಗೋಗ್ರಾಫ್ ಎಂಬುದು ಸ್ವೀಡನ್ನಿನಲ್ಲಿ ತಯಾರಾದ್ದು.

4. ಕ್ಷ-ಕಿರಣ: ಸ್ವರಯಂತ್ರ, ಸ್ವರತಂತುಗಳು, ಸ್ವರಯಂತ್ರಮುಖ ಮುಂತಾದುವನ್ನು ಗುರುತಿಸಲು ಧ್ವನಿಗಳ ಉಚ್ಛಾರದಲ್ಲಿ ಜಿಹ್ವೆಯ ಎತ್ತರವನ್ನು ಗುರುತಿಸಲು ಈ ಯಂತ್ರವನ್ನು ಬಳಸಿಕೊಳ್ಳಲಾಯಿತು. ಈ ಯಂತ್ರವನ್ನು ಈ ಕ್ಷೇತ್ರದಲ್ಲಿ ಬಳಸಿಕೊಂಡವರಲ್ಲಿ ಜೋನ್ಸ್, ಸ್ವೀಫನ್ ಮತ್ತು ಜಾರ್ಜ್ ಮುಂತಾದ ವಿದ್ವಾಂಸರು ಅತಿ ಮುಖ್ಯರು.

	5. ಲ್ಯಾರಿಂಗೊಸ್ಕೋಪ್: ಸ್ವರಯಂತ್ರ, ಸ್ವರಯಂತ್ರಮುಖ, ಸ್ವರತಂತುಗಳು ಮುಂತಾದವುಗಳ ಸ್ಥಿತಿಗತಿಗಳನ್ನು ತಿಳಿಯಲು ಬಳಸುವ ಯಂತ್ರ. ಕ್ಷಕಿರಣ, ಎಂಡೋಸ್ಕೋಪ್‍ಗಳನ್ನು ಕೂಡ ಬಳಸಿಕೊಳ್ಳಬಹುದಾದರೂ ಕೆಲವರು ಧ್ವನಿಗಳ ಅಧ್ಯಯನಕ್ಕೆ ಈ ಉಪಕರಣವನ್ನೆ ಹೆಚ್ಚಾಗಿ ಬಳಸಿಕೊಂಡರು. 1806ರಲ್ಲಿ ಬೊಟ್ಜಿನಿ ಎಂಬ ವಿದ್ವಾಂಸ ಧ್ವನಿಗಳ ಅಧ್ಯಯನಕ್ಕೆ ಇದನ್ನು ಬಳಸಿಕೊಂಡ ಇದಾದ ಇಪ್ಪತ್ತು ವರ್ಷಗಳ ಅನಂತರ ಸ್ವರಯಂತ್ರ ಮತ್ತು ಸ್ವರಯಂತ್ರ ಮುಖಭಾಗವನ್ನು ಪರೀಕ್ಷಿಸಲು ಬಾಬಿಂಗ್‍ಟನ್ ಎಂಬ ವಿದ್ವಾಂಸ ಲ್ಯಾರಿಂಗೊಸ್ಕೋಪ್ ಮತ್ತು ಎಂಡೋಸ್ಕೋಪ್ ಎರಡನ್ನು ಬಳಸಿಕೊಂಡ. 1854ರಲ್ಲಿ ಪ್ರಸಿದ್ಧ ಸಂಗೀತಶಾಸ್ತ್ರಜ್ಞನೊಬ್ಬ ಹಾಡುವಾಗ ಸ್ವರತಂತುಗಳು ಹೇಗೆ ಕೆಲಸ ಮಾಡುತ್ತವೆ. ಎಂಬುದನ್ನು ತಿಳಿಯಲು ಈ ಉಪಕರಣವನ್ನು ಬಳಸಿಕೊಂಡ. 1857ರಲ್ಲಿ ಬೇರೆ ಬೇರೆ ವೈದ್ಯರು ಸತ್ತವರ ಶ್ವಾಸಕೋಶ, ಸ್ವರಯಂತ್ರಮುಖ ಮುಂತಾದವನ್ನು ಪರೀಕ್ಷಿಸಲು ಈ ಉಪಕರಣಗಳನ್ನು ಬಳಸಿಕೊಂಡರು.

	6. ಎಂಡೋಸ್ಕೋಪ್: ಬಾಯಿ ಮುಚ್ಚಿಕೊಂಡು ಉಚ್ಚಾರ ಮಾಡುತ್ತಿರುವಾಗಲೂ ಸ್ವರಯಂತ್ರ, ಸ್ವರತಂತುಗಳ ವಿವಿಧ ಕಾರ್ಯಗಳನ್ನು ಗುರುತಿಸಬಲ್ಲ ಯಂತ್ರ.

	7 ಆಸಿಲೋಗ್ರಾಫ್: ಉಚ್ಛರಿಸುವಾಗ ಯಾವ ಯಾವ ಧ್ವನಿಗಳು ಎಷ್ಟೆಷ್ಟು ಸಮಯ ತೆಗೆದುಕೊಳ್ಳುತ್ತವೆ ಎಂಬ ವಿಷಯ ತಿಳಿದುಕೊಳ್ಳಲು ಬಳಸುವ ಯಂತ್ರ. ಜೊತೆಗೆ ಧ್ವನಿತರಂಗಗಳು ಪ್ರಸಾರವಾಗುವ ವೇಗ, ಅವುಗಳ ನಾದತೆ, ತೀವ್ರತೆ, ಆಯತನ, ಗಂಭೀರತೆ, ಸ್ವರತೆ ಮುಖರತೆ ಮುಂತಾದವುಗಳನ್ನು ಸ್ಪಷ್ಟವಾಗಿ ನಿರ್ಧರಿಸಲು ಸ್ವರ್ಶ, ಸಂಘರ್ಷಿ, ಅನುಘರ್ಷಿ, ಅನುನಾಸಿಕ, ಪಾಶ್ರ್ಚಿಕ, ಲುಂಠಿತ, ತಾಡಿತ ಮುಂತಾದ ಧ್ವನಿಗಳ ಶ್ರವಣ ಭೇದವನ್ನು ಗುರುತಿಸಿ ವಿವರಿಸಲು ಇದನ್ನು ಬಳಸಿಕೊಳ್ಳುತ್ತಾರೆ.

	8. ಪ್ಯಾಟರ್ನ್‍ಪ್ಲೇಬ್ಯಾಕ್: ಉಚ್ಚರಿತಧ್ವನಿಸಾಮಗ್ರಿಯನ್ನು ಟೇಪ್‍ರೆಕಾರ್ಡ್ ಮಾಡಿಕೊಂಡು ಬೇಕೆನಿಸಿದಾಗ ಈ ಉಪಕರಣದ ಸಹಾಯದಿಂದ ಮತ್ತೆ ಕೇಳಬಹುದು. ಇತ್ತೀಚೆಗೆ ಟೇಪ್‍ರೆಕಾರ್ಡ್ ಕಮ್ ಪ್ಲೇಬ್ಯಾಕ್ ಉಪಕರಣಗಳು ಲಭ್ಯವಿವೆ. ಪ್ಯಾಟರ್ನ್‍ಪ್ಲೇಬ್ಯಾಕ್ ಉಪಕರಣವನ್ನು ಮೊಟ್ಟಮೊದಲು ಫ್ರಾಂಕಲಿನ್ ಮತ್ತು ವೋಸ್ಟ್ ಎಂಬ ವಿದ್ವಾಂಸರು ಅಳವಡಿಸಿದರು. ಈ ಪ್ಯಾಟರ್ನ್‍ಪ್ಲೇಬ್ಯಾಕ್‍ನ ಸಹಾಯದಿಂದ ಸ್ಟೆಕ್ಟೋಗ್ರಾಫ್ ತೆಗೆದ ಚಿತ್ರವನ್ನು ಕೂಡ ಪ್ಲೇ ಮಾಡಿನೋಡುವ ಅವಕಾಶಗಳಿವೆ. ಇಂಥ ಉಪಕರಣಗಳು ಆದಿವಾಸಿ ಭಾಷೆಗಳನ್ನು ಅಭ್ಯಸಿಸಲು ಕೂಡ ಉಪಯುಕ್ತವೆನಿಸಿವೆ.

	9. ಟೇಪ್‍ರೆಕಾರ್ಡ್: ಭಾಷೆಯ ಅಧ್ಯಯನದ ದೃಷ್ಟಿಯಿಂದ ಇದು ತುಂಬ ಉತ್ತಮವಾದ ಉಪಕರಣ. ಆಡುವ ಎಲ್ಲ ಮಾತುಗಳನ್ನೂ ಇದು ತದ್ವತ್ತಾಗಿ ಹಿಡಿದಿರುತ್ತದೆ.

	10. ಪಿಚ್ ಮೀಟರ್: ಸ್ವರಧ್ವನಿಗಳಲ್ಲಿ ಹ್ರಸ್ವ, ದೀರ್ಘ, ಪ್ಲುತ ಮುಂತಾದವುಗಳ ಅಂತರವನ್ನು ನಿರ್ಧರಿಸಲು ಸ್ವರಸಂಬಂಧಿ ಸ್ವರಾಘಾತ, ಬಲಾಘಾತ, ಸ್ವರಲಹರಿ ಮುಂತಾದವುವನ್ನು ತಿಳಿಯಲು ವಾಕ್ಯಗಳಲ್ಲಿ ಪೂರ್ಣವಿರಾಮ, ಅಲ್ಪವಿರಾಮ ಮುಂತಾದುವನ್ನು ಅಳೆಯಲು ಇದನ್ನು ಬಳಸಲಾಗುತ್ತಿದೆ.

	11. ಇಂಟೆನ್‍ಸಿಟಿ ಮೀಟರ್: ಇದರಿಂದ ಧ್ವನಿತರಂಗಗಳ ವೇಗ, ನಾದತೆ, ತೀವ್ರತೆ, ಗಂಭೀರತೆ, ಆಯತನ ಮುಂತಾದವನ್ನು ಸುಲಭವಾಗಿ ಅಳೆಯಬಹುದು.

	12. ಸ್ಪೀಚ್ ಸ್ಟ್ರೆಚರ್: ಇದರಲ್ಲಿ ಭಾಷಾಸಂಶೋಧಕ ಇಲ್ಲವೆ ಧ್ವನಿ ವಿಜ್ಞಾನ ತನಗೆ ಅಗತ್ಯವಾಗಿ ಬೇಕಾಗಿರುವ ಸಾಮಾಗ್ರಿಯನ್ನು ರೆಕಾರ್ಡ್ ಮಾಡಿಕೊಂಡು ಬೇಕಾದಾಗ ಪ್ಲೇ ಮಾಡಿ ಕೇಳಬಹುದಾದ ಸೌಲಭ್ಯ ಉಂಟು. ಇದು ಒಂದು ರೀತಿಯಲ್ಲಿ ಟೇಪ್‍ರೆಕಾರ್ಡರ್ ಮತ್ತು ಪ್ಯಾಟರ್ನ್‍ಪ್ಲೇಬ್ಯಾಕ್‍ಗಳನ್ನು ಹೋಲುತ್ತದೆ ಎಂದು ಹಲವರ ನಂಬಿಕೆ.

	13. ಸೌಂಡ್ ಸ್ಟೆಕ್ಟೋಗ್ರಾಫ್: ಇದನ್ನು ಎರಡನೆಯ ಮಹಾಯುದ್ಧದ ಸಮಯದಲ್ಲಿ ತಯಾರಿಸಲಾಯಿತು. ಇದರಿಂದ ಧ್ವನಿ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲ, ಧ್ವನಿತರಂಗಗಳ ವೇಗ, ಆವೃತ್ತಿ ಮುಂತಾದವನ್ನು ಗುರುತಿಸಬಹುದು. ಸೋನೋಗ್ರಾಫ್, ಪೈಬ್ರಲೈಜರ್, ಕಾರ್ಡಿಯಲೈಜರ್ ಮುಂತಾದವು ಇದರ ವಿವಿಧ ರೂಪಗಳು.

	ಸ್ವರಯಂತ್ರದ ಸ್ವರತಂತುಗಳ ವಿಶೇಷ ಅಧ್ಯಯನಕ್ಕೆ ಅಟೋಫೋನೋಸ್ಕೋಪ್ ಉಪಕರಣವನ್ನು ಬಳಸಲಾಗುವುದು. ಇದರ ಜೊತೆಗೆ ಶ್ವಾಸಕೋಶದ ಕ್ರಿಯೆಯನ್ನು ತಿಳಿಯಲು ಬ್ರೀದಿಂಗ್ ಫ್ಲಾಸ್ಕ್ ಉಪಕರಣವನ್ನು ಬಳಸುವರು. ಹಾಗೆಯೇ ಸ್ವರತಂತುಗಳು ದೊಡ್ಡದಾಗುವುದು ಮತ್ತು ಸಂಕುಚಿತಗೊಳ್ಳುವುದು ಮುಂತಾದವನ್ನು ತಿಳಿಯಲು ಸ್ಟ್ರೊಬೊಲ್ಯಾರಿಂಗೋಸ್ಕೋಪ್ ಎಂಬ ಉಪಕರಣವನ್ನು ಬಳಸುತ್ತಿದ್ದಾರೆ.

	ಮೇಲೆ ಹೇಳಿದ ವಿವಿಧ ಯಂತ್ರೋಪಕರಣಗಳ ಜೊತೆಗೆ ಎಲೆಕ್ಟ್ರಿಕಲ್ ವೋಕಲ್ ಟ್ರ್ಯಾಕ್ಟ್ ಅನ್ನೂ ಫಾರ್ಮೆಂಟ್ ಗ್ರಾಫಿಕ್ ಮೆಷೀನ್ ಮುಂತಾದ ಯಂತ್ರೋಪಕರಣಗಳನ್ನೂ ಬಳಸಲಾಗುತ್ತಿದೆ.

 		(ಕೆ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ